ಕಳಸ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಭದ್ರಾವತಿಯ ಬಲದಂಡೆಯ ಬಳಿ ಉ.ಅ 13ಲಿ 14` ಮತ್ತು ಪೂ.ರೇ. 75ಲಿ 26`ನಲ್ಲಿ ಸಹ್ಯಾದ್ರಿಯ ಉತ್ತುಂಗ ಶ್ರೇಣಿಗಳ ನಡುವಣ ಕಣಿವೆಯಲ್ಲಿದೆ. ಮೂಡಿಗೆರೆಗೂ ಇಲ್ಲಿಗೂ 24 ಮೈ. ದೂರ. ಕಾರ್ಕಳದ ಭೈರರಸರ ಆಳ್ವಿಕೆಯಲ್ಲಿ ಮುಖ್ಯ ಸ್ಥಳಗಳಲ್ಲೊಂದಾಗಿದ್ದ ಕಳಸದಲ್ಲಿ ಆ ಕಾಲಕ್ಕೆ ಸೇರಿದ ದೊಡ್ಡ ಕಳಸೇಶ್ವರ ದೇವಾಲಯವಿದೆ. ಉತ್ತರ ದೇಶದಿಂದ ಬಂದ ಶ್ರುತಬಿಂದುವೆಂಬ ರಾಜನಿಂದ ಈ ದೇವಾಲಯ ನಿರ್ಮಿತವಾಯಿತೆಂಬ ಐತಿಹ್ಯವಿರುವುದರಿಂದ ಮೊದಲಿಗೆ ಇದು ಜೈನಮಂದಿರವಾಗಿದ್ದಿರ ಬಹುದೆಂದು ಊಹಿಸಲಾಗಿದೆ. ಮೊದಲಿಗೆ ಹುಂಚದವರ, ಅನಂತರ ಭೈರರಸರ, ಅನಂತರ ಐಗೂರು ನಾಯಕರ ಆಳ್ವಿಕೆಗೆ ಇದು ಒಳಪಟ್ಟಿತು.  ನದೀದಂಡೆಯಲ್ಲಿರುವ ದೊಡ್ಡ ಕಲ್ಲುಬಂಡೆಯೊಂದರ ಮೇಲಿರುವ ಸಂಸ್ಕøತ ಶಾಸನವೊಂದು ಅದನ್ನು ಶ್ರೀಮಧ್ವಾಚಾರ್ಯರು ಒಂದು ಕೈಯಲ್ಲಿ ಎತ್ತಿ ಅಲ್ಲಿ ತಂದಿಟ್ಟುದಾಗಿ ತಿಳಿಸುತ್ತದೆ.

ಇಲ್ಲಿಯ ಕಳಸೇಶ್ವರ ಅಥವಾ ಕಳಸನಾಥ ದೇವಾಲಯ ಈಗಿರುವ ಸ್ಥಿತಿಯಲ್ಲಿ ನಾಯಕರ ಕಾಲಕ್ಕೆ ನಿರ್ದೇಶಿತವಾಗಿದೆ. ಆದರೆ ದೇವಾಲಯದ ಅಕ್ಕಪಕ್ಕಗಳಲ್ಲಿ ದೊರಕುವ ವಾಸ್ತುಶಿಲ್ಪದ ಅವಶೇಷಗಳೂ ಇನ್ನು ಕೆಲವು ಶಿಲ್ಪಗಳೂ ನಿರ್ದಿಷ್ಟವಾಗಿ ಹೊಯ್ಸಳ ಶೈಲಿಗೆ ಸೇರತಕ್ಕವುಗಳಾದುದರಿಂದ ಇಲ್ಲಿ ಮೊದಲಿಗೆ ಹೊಯ್ಸಳ ದೇವಾಲಯವಿದ್ದು ಪಾಳುಬಿದ್ದ ಅನಂತರ ನಾಯಕರ ಕಾಲದಲ್ಲಿ ಈಗಿನ ಕಟ್ಟಡಗಳು ನಿರ್ಮಿತವಾಗಿರಬಹುದು.  ಈ ದೇವಾಲಯದ ಗರ್ಭಗುಡಿಯಲ್ಲಿರುವ 9 ಅಂಗುಲ ಎತ್ತರದ ಲಿಂಗ ಉತ್ತರಕ್ಕೆ ಬಾಗಿದೆ.  ಗರ್ಭಗುಡಿಯ ಮೇಲಿನ ಶಿಖರಕ್ಕೆ ಲೋಹದ ಕಲಶವಿದೆ.  16 ಕಲ್ಲಿನ ಕಂಬಗಳಿರುವ ನವರಂಗಕ್ಕೆ ಉತ್ತರ ಮತ್ತು ದಕ್ಷಿಣ ದಿಕ್ಕುಗಳಲ್ಲಿ ದ್ವಾರಗಳಿವೆ.  ಮುಖಮಂಟಪದ ಒಳಪಕ್ಕದಲ್ಲಿ ನಾಲ್ಕು ಕಂಬಗಳೂ ಮುಂಭಾಗದಲ್ಲಿ ದ್ರಾವಿಡ ಶೈಲಿಯ, ಅಡಿಯಲ್ಲಿ ಸಿಂಹಗಳಿರುವ ಎರಡು ಕಂಬಗಳೂ ಇವೆ.

 ಪಕ್ಕದಲ್ಲಿರುವ ದೇವೀಮಂದಿರವೂ ನಾಯಕರ ಕಾಲಕ್ಕೆ ಸೇರಿದುದು. ಈ ಮಂದಿರದ ಮಹಾದ್ವಾರದ ಇಕ್ಕೆಲಗಳಲ್ಲಿ ಸಿಂಹವಾಹಿನಿಯರಾದ ಸ್ತ್ರೀದ್ವಾರಪಾಲಕರಿದ್ದಾರೆ ಗಜಪತಿಯ, ತುಘಲಖನ ಮತ್ತು ವಿಜಯನಗರದ ಕೆಲವು ನಾಣ್ಯಗಳು ಇಲ್ಲಿ ದೊರಕಿವೆ.            

 (ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ